ಅದೆಷ್ಟೋ ಬಾರಿ..

Share:

Let's make stories to remember..

Arts


ಪದಗಳನೆಲ್ಲ ಗುಡ್ಡೆ ಹಾಕಿಕೊಂಡು ಕೂತಿದಿನಿ., ಹೊರಗೆ ಭಾವನೆಗಳ ಸುರಿಮಳೆ ಜೋರಾಗಿದೆ. ಅಲೆಲ್ಲೋ ದೂರದಲ್ಲಿ ಕಲ್ಲಾಗಿದ್ದ ಹಿಮ ಪರ್ವತ., ಒಲವ ಹೊಂಬಿಸಿಲಿಗೆ ಕರಗಿ ನೀರಾಗಿ., ಹೊಳೆಯಾಗಿ., ನದಿಯಾಗಿ ಕಡಲೆಡೆಗೆ ಸಾಗಿದಂತೆ., ಇಲ್ಲೊಂದು ಜೀವ ನಿನ್ನ ಸೇರಲು ಹವಣಿಸಿದೆ.. ನೀ ಸರಿವ ಸದ್ದಿಗೆ ನನ್ನ ನಾ ತಡೆಯಲಾಗದೆ ಹಿಂಬಾಲಿಸುತ್ತಿರುವೆ., ನಾ ನಿನ್ನ ಆಂತರ್ಯದೊಳಗೆ ಅಂಬೆಗಾಲಿಡುತ್ತಾ ನಿನ್ನೆದೆಯ ಹೊಸಲಿನೆಡೆಗೆ ಬರುತ್ತಿರುವಂತೆ.. ತುಂಬಾ ಮೌನಗಳ ನಂತರ ಮಾತು ಹಿತವೆನಿಸಬಹುದು., ಮುಂಜಾವು ಮನೆ ಹೆಂಚಿಂದ ತೊಟ್ಟಿಕುತ್ತಿರುವ ಮಳೆ ಹನಿ ಪಿಸುಗುಟ್ಟುವ ಹಾಗೆ.. ಇಷ್ಟು ದಿನಗಳ ಮೌನ ಕಹಿ ಎನಿಸಿದ್ದರೆ ಕ್ಷಮಿಸು.. ಹಾಳೆ ಹರಿದು., ದೋಣಿ ಕಟ್ಟಿ ಬಿಡುವ ಆಟ ಕಲಿಸಿದ ನಿನ್ನ ಅಂಗೈ ಸ್ಪರ್ಶ ಇನ್ನೂ ತಂಪಾಗಿ ನನ್ನ ಬೆರಳಂಚಿನಲ್ಲೇ ಉಳಿದು ಹೋಗಿದೆ.. ನಿನ್ನ ಪಾದದ ನೀರಚ್ಚು., ಮೆಟ್ಟಿಲ ಮೇಲೆ ಆರದೆ ಅಚ್ಚಾಗಿದೆ.. ಇದ್ದು ಬಿಡು ನನ್ನೊಂದಿಗೆ ಹೀಗೆ ಮಳೆಯಲಿ ಆಡುತ್ತಾ.. ಅದೆಷ್ಟೋ ಬಾರಿ., ಅದೇನೋ ಹೇಳಲು ಬಂದವನು ಮಾತನ್ನುಳಿಸಿಕೊಂಡು ಹಿಂತಿರುಗಿ ಬಂದಿರುವೆ.. ಸೋತ ಹೃದಯ ಕಂಡ ಕನಸು ನಿಜವಾಗಲೆಂದು ಬಯಸಿ ನಗೆ ಬೀರಿದೆ.. ಇರುಳು ಜಾರಿ., ಕನಸು ಕರಗಿ ಮುಂಜಾನೆ ಕಣ್ಣುಜ್ಜಿ ಎದ್ದ ಕೂಡಲೇ ನಿನ್ನ ಮುಂಗುರುಳ ನಡುವೆ ನಗುವ ನಿನ್ನ ಕಣ್ಣ ಮುದ್ದಿಸುವ ಕನಸದು.. ನಿನ್ನ ಜಿಗರೆಯಂತ ವೇಗದ ನಡುವೆ ಹೆಡ್ಡನಾಗಿ ನಿನ್ನೆ ನೋಡುತ್ತಾ ಕೂತ ಕನಸದು.. ಸುಮವ ತುಂಬಿ ಮನೆ ತುಂಬಾ ನಿ ಅರಳಿರಳು., ಮೈ ಮರೆವಂತೆ ನಿನ್ನ ತಬ್ಬಿದ ಕನಸದು.. ನೀಲಿ ಆಗಸಕ್ಕೆ ಪುಟ್ಟ ಹಕ್ಕಿಯೊಂದು ಪ್ರೀತಿಸಿ ಮಲ್ಲಿಗೆ ಮೂಡಿಸಿದ ಹಾಗೆ., ಪದಗಳಲಿ ಕನಸ ಜೋಡಿಸಿ ಮುಂದಿಟ್ಟಿರುವೆ., ಈ ಎಲ್ಲಾ ಕನಸು ನೀ ನಿನ್ನದಾಗಿಸಿಕೊಳ್ಳಬೇಕು ಎಂಬ ನೀರಿಕ್ಷೆಗಳಿಲ್ಲಾ., ಹೊರಗೆ ಹೆಂಚಿಂದ ಮಳೆ ಹನಿ ಹಾಗೆ ತೊಟ್ಟಿಕ್ಕುತ್ತಿರಲಿ., ಆ ಸದ್ದಿನ ನಡುವೆ ನಿನ್ನೊಂದಿಗಿನ ಮುಂಜಾವಿನ ಈ ಸವಿಗನಸು ಹೀಗೆ ಸಾಗುತಿರಲಿ., ಇದಕ್ಕಿಂತ ಹೆಚ್ಚು ಇನ್ನೇನು ಬಯಸಲಿ ? ಕನಸಲ್ಲಾದರೂ ಸರಿ., ಕಣ್ಣುಜ್ಜಿ ಏಳುವ ವೇಳೆಗೆ ಇರುವೆಯ ನೀ ನನ್ನೆದುರು..?